ದಸ್ತಯೇಫ್‍ಸ್ಕಿ, ಫ್ಯೊದರ್ ಮ್ಯಿಕೈಲವ್ಯಿಚ್
1821-1881. ರಷ್ಯದ ಕಾದಂಬರಿಕಾರರಲ್ಲಿ ಅಗ್ರಪಂಕ್ತಿಗೆ ಸೇರಿದವ. ಪ್ರತಿಕೋದ್ಯಮಿ, ಸಣ್ಣ ಕಥೆಗಾರ. ಹುಟ್ಟಿದ್ದು ಮಾಸ್ಕೊದಲ್ಲಿ. ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದು ಎರಡು ವರ್ಷ ಸೈನ್ಯದಲ್ಲಿದ್ದ. ಕ್ರಾಂತಿಯ (1848) ಅನಂತರ ಮತಸಂಸ್ಥೆ ಮತ್ತು ಸರ್ಕಾರಗಳ ವಿರುದ್ಧ ನಡೆಸಿದ ಚಟುವಟಿಕೆಗಳಿಗಾಗಿ ಎಂಟು ವರ್ಷಗಳ ಕಠಿಣಶಿಕ್ಷೆಗೊಳಗಾದ. ನಾಲ್ಕು ವರ್ಷಗಳ ಕಾಲ ಸೆರೆಮನೆಯಲ್ಲಿ ಓದಲು ಬೇರೇನೂ ಇಲ್ಲದಾಗ ಬೈಬಲ್ಲನ್ನೇ ಓದುತ್ತ ಕಾಲ ಕಳೆದ. ಸೆರೆಮನೆಯ ವಾಸ ಈತನ ಯೌವನದ ಪ್ರಗತಿಗಾಮಿ ಉತ್ಸಾಹಕ್ಕೆ ತಡೆ ಹಾಕಿತು. 1859ರಲ್ಲಿ ಕ್ಷಮಾದಾನ ಪಡೆದು ಪೀಟರ್ಸ್‍ಬರ್ಗಿಗೆ ಹಿಂದಿರುಗಿದ. ಕೆಲಕಾಲ ಪತ್ರಿಕೋದ್ಯಮಿಯಾಗಿ, ಸರ್ಕಾರದ ಅಧಿಕಾರಿಯೊಬ್ಬನ ಮೂರ್ಖತನದಿಂದ ಅಪಾರ ನಷ್ಟವನ್ನನುಭವಿಸಿ, ದಿವಾಳಿಯಾದ. 1873ರವರೆಗೆ ಈತನ ಬಾಳು ಕಷ್ಟಮಯವಾಗಿತ್ತು. ಅನಂತರ ಈತನ ಕೀರ್ತಿ ಹಬ್ಬಿತಲ್ಲದೆ ಪರಿಸ್ಥಿತಿ ಆರ್ಥಿಕವಾಗಿಯೂ ಸುಧಾರಿಸಿತು. ಮೊದಲ ಮದುವೆ ಈತನಿಗೆ ಸುಖವನ್ನು ತರಲಿಲ್ಲ. ಎರಡನೆಯ ಮದುವೆ ಸುಖಸಮಾಧಾನಗಳನ್ನಿತ್ತಿತು. ಹೆಂಡತಿಯ ವ್ಯವಹಾರ ಚತುರತೆ ಈತನಿಗೆ ಅನೇಕ ವಿಧದಲ್ಲಿ ಸಹಾಯಕವಾಯಿತು.

	ಈತನ ಸಾಹಿತ್ಯ ಸೃಷ್ಟಿಯನ್ನು 1845ರಿಂದ 1849, 1857ರಿಂದ 1863, 1863ರಿಂದ ಮುಂದಕ್ಕೆ ಎಂಬುದಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ಈತನ ಪ್ರಥಮ ಕಾದಂಬರಿ ಪೂರ್ ಫೋಕ್ (ಬಡಜನರು-1846) ಎಂಬುದು. ನೆಕ್ರಸಾಫ್, ಬೆಲಿನ್‍ಸ್ಕಿಯವರಂಥ ಖ್ಯಾತಸಾಹಿತಿಗಳ ಮನ್ನಣೆ ಪಡೆಯಿತು. ಇದರ ಕೇಂದ್ರಭಾವ ಅನುಕಂಪ-ಕಾಲಕಸವಾಗಿ, ಹಾಸ್ಯಕ್ಕೆ ಗುರಿಯಾಗಿ ಆದರೂ ಉದಾತ್ತಜೀವನ ನಡೆಸುವ ಮಾನವರ ವಿಷಯದಲ್ಲಿ-ಅನುಕಂಪ. ಈತನ ಮೊದಲ ಭಾಗದ ಸಾಹಿತ್ಯಿಕ ಕೃತಿಗಳಲ್ಲಿ ಗಾಗಲ್‍ನ ಪ್ರಭಾವ ಸ್ಪಷ್ಟವಾಗಿದೆ. ಈತನ ಮಹಾನ್ ಕೃತಿಗಳೆಲ್ಲ ಸೆರೆಮನೆಯನ್ನು ಸೇರಿ ಅಲ್ಲಿನ ಕ್ರೂರ ಅನುಭವಗಳಾದನಂತರ ರಚಿತವಾದವು. ಈತನ ಮಧ್ಯಕಾಲದ ಕೃತಿಗಳಲ್ಲಿ ಗಾಗಲ್‍ನ ಪ್ರಭಾವವಿಲ್ಲ. ಆದರೆ ಕೊನೆಯ ಭಾಗದ ಕೃತಿಗಳಲ್ಲಿ ಗಹನತೆ ಇಲ್ಲ. ಈತನ ಜೀವಿತಕಾಲದಲ್ಲಿಯೇ ಹೆಸರು ಪಡೆದ ಕೃತಿ ದಿ ಹೌಸ್ ಆಫ್ ದಿ ಡೆಡ್ (ಸಾವಿನ ಮನೆಯ ನೆನಪುಗಳು 1861-62) ಈ ಅವಧಿಗೆ ಸೇರಿದುದು. ಇದರ ಕೇಂದ್ರ ವ್ಯಕ್ತಿ ಸೈಬೀರಿಯದ ಸೆರೆಮನೆಯಲ್ಲಿ ಶಿಕ್ಷೆಗೊಳಗಾಗಿ ಹಲವು ವರ್ಷಗಳ ಕಾಲ ಕೊಳೆಯುತ್ತಿದ್ದ ವಿದ್ಯಾವಂತವರ್ಗಕ್ಕೆ ಸೇರಿದ, ಖೈದಿಯೊಬ್ಬ. ಸಹಜವಾಗಿ ಇಲ್ಲಿ ಲೇಖಕನ ಸ್ವಾನುಭವಗಳ ಛಾಯೆ ಇದೆ. ಒಟ್ಟಿನಲ್ಲಿ ಈ ಕೃತಿಯಲ್ಲಿ ಕಹಿ ಇಲ್ಲ, ಆಶಾದೃಷ್ಟಿಯಿದೆ ಎನ್ನುವುದು ವಿಶೇಷವಾದ ಅಂಶ. ಶಿಕ್ಷೆಯ ನಿರರ್ಥಕತೆಯನ್ನು ಇಲ್ಲಿ ನಿರೂಪಿಸಲಾಗಿದೆ. ವಿದ್ಯಾವಂತ ವರ್ಗ ಜನಸಾಮಾನ್ಯರಿಂದ ದೂರವಾಗಿರದೆ ಅವರೊಡನೆ ಒಂದಾಗಬೇಕು ಎನ್ನುವುದು ಲೇಖಕನ ದೃಷ್ಟಿ. ಈತನ ಮಹಾಕಾದಂಬರಿಗಳು ಕ್ರೈಮ್ ಅಂಡ್ ಪನಿಷ್‍ಮೆಂಟ್ (ಅಪರಾಧ ಮತ್ತು ಶಿಕ್ಷೆ-1866); ದಿ ಇಡಿಅಟ್ (ಪೆದ್ದ 1868); ದಿ ಡೆವಿಲ್ಸ್ (ದೆವ್ವಗಳು 1871-72) ಮತ್ತು ದಿ ಬ್ರದರ್ಸ್ ಕಾರಾಮಾಜಾಯ್ (1880)-ಇವು ಕಡೆಯ ಭಾಗಕ್ಕೆ ಸೇರಿದುವು. ಇವಕ್ಕೆ ಮೂರು ದೃಷ್ಟಿಗಳಿಂದ ವ್ಯಾಖ್ಯಾನ ಮಾಡಲಾಗಿದೆ. ಈತನ ಸಮಕಾಲೀನರು ಇವು 1865ರಿಂದ 1880ರವರೆಗಿನ ರಷ್ಯದ ಸಾರ್ವಜನಿಕ ಮತ್ತು ಸಾಮಾಜಿಕ ಜೀವನಕ್ಕೆ ಸಂಬಂಧಿಸಿದುವೆಂದೂ ಈತ ಇವುಗಳಲ್ಲಿ ತನ್ನ ಅಭಿಪ್ರಾಯವನ್ನು ಪರೋಕ್ಷವಾಗಿ ನಿರೂಪಿಸುತ್ತಿರುವನೆಂದೂ ಭಾವಿಸಿದರು. ಮುಂದಿನ ತಲೆಮಾರಿನವರು ಇವು ಹೊಸ ಕ್ರೈಸ್ತಧರ್ಮದ ನಿರೂಪಣೆ ಎಂದು ಬಗೆದು ಮಾನವಕುಲಕ್ಕೆ ಶಾಂತಿ ತರುವ ಹೊಸದೊಂದು ಸಾಮರಸ್ಯವನ್ನು ಲೇಖಕ ಜಗತ್ತಿಗೆ ನೀಡಿರುವನೆಂದು ಭಾವಿಸಿದರು. ಕೃತಿಗಳು, ಓದುಗರಿಂದ ಕಾಲಮಾನದಲ್ಲಿ ದೂರ ಸರಿದಂತೆ ಲೇಖಕನ ಆಧ್ಯಾತ್ಮಿಕ ಅನುಭವಗಳ ದುರಂತದ ನಿರೂಪಣೆಗಳಾಗಿವೆ ಎನ್ನುವುದು ಈಚೆಗಿನ ಅಭಿಪ್ರಾಯ.

	ಕ್ರೈಮ್ ಅಂಡ್ ಪನಿಷ್‍ಮೆಂಟ್ ಕಾದಂಬರಿಗೆ ದಸ್ತಯೇಫೆಸ್ಕಿಯ ಮನಸ್ಸಿನಲ್ಲಿ ಬಹಳ ಕಾಲದಿಂದ ಇದ್ದ ಒಂದು ಭಾವನೆಯೇ ಕೇಂದ್ರ ಎನಿಸುತ್ತದೆ. ಪಾಪ ಪಾಪಿಯಲ್ಲಿನ ಉದಾತ್ತವಾದುದನ್ನು ನಾಶಗೊಳಿಸುವುದರಿಂದ ಅದಕ್ಕೆ ಮನುಷ್ಯರ ಜಗತ್ತಿನಲ್ಲಿ ಶಿಕ್ಷೆಯಾಗದಿದ್ದರೂ ಪಶ್ಚಾತ್ತಾಪವಂತೂ ಉದ್ಭವಿಸಿಯೇ ತೀರುತ್ತದೆ ಎನ್ನುವುದೇ ಆ ಭಾವನೆ. ವಿದ್ಯಾರ್ಥಿಯೊಬ್ಬ ಒಂದು ಕೊಲೆ ಮಾಡುತ್ತಾನೆ. ಆತ ಕೊಲೆಗಡುಕನೆಂದು ಯಾರಿಗೂ ಅನುಮಾನ ಬರುವುದಿಲ್ಲ. ಒಂದಾದ ಅನಂತರ ಮತ್ತೊಂದು ಕೊಲೆ ಮಾಡಿ, ಮಾನವರ ನೀತಿನಿಯಮಗಳ ಸೀಮೆಯನ್ನು ದಾಟಿ, ಅತಿಮಾನವನಾಗುವ ಕನಸು ಆತನದು. ಆದರೆ ಈ ಪಾಪದ ಸ್ಮøತಿ ಆತನನ್ನು ಕಾಡುತ್ತಲೇ ಇರುತ್ತದೆ. ಕೊನೆಗೆ ಪ್ರಾಯಶ್ಚಿತ್ತವಾಗಲೇಬೇಕೆಂಬ ಅರಿವು ಮೂಡಿದಾಗ ತಾನೇ ಸತ್ಯವನ್ನೊಪ್ಪಿಕೊಂಡು, ನತದೃಷ್ಟ ಸ್ತ್ರೀಯೊಬ್ಬಳ ಬಾಳಿನೊಡನೆ ತನ್ನ ಬಾಳನ್ನು ಬೆರೆಸುತ್ತಾನೆ. ಇದರಲ್ಲಿ ಲೇಖಕ ನರಕಕ್ಕಿಳಿಯುವ ಆತ್ಮದ ಯಾತನೆಯ ಸೀಮಾರೇಖೆಯನ್ನು ಮುಟ್ಟಿದಂತೆ ಭಾಸವಾಗುತ್ತದೆ. ನಾಯಕ ನತದೃಷ್ಟ ಸ್ತ್ರೀಗೆ ಹೇಳುವ ಮಾತುಗಳು ಈ ಕೃತಿಯ ಮತ್ತು ಲೇಖಕನ ಎಲ್ಲ ಕೃತಿಗಳ ಧ್ಯೇಯವಾಕ್ಯ ಎನ್ನಬಹುದು; ನಾನು ಮೊಣಕಾಲೂರಿರುವುದು ನಿನ್ನ ಮುಂದಲ್ಲ. ನರಳುತ್ತಿರುವ ಎಲ್ಲ ಮಾನವರ ಮುಂದೆ. ಇಡಿಅಟ್‍ನಲ್ಲಿನ ನಾಯಕ ಜಗತ್ತೆಲ್ಲ ತಿಳಿದಂತೆ ಬೆಪ್ಪನಲ್ಲ, ಒಂದು ವಿಶೇಷವಾದ ಶಾಂತಿಯ ಸ್ಥಿತಿಯನ್ನು ಮುಟ್ಟಿದ, ಮುಗ್ಧತೆಯೇ ಮೂರ್ತಿವೆತ್ತಂತಿದ್ದ ತರುಣ. ಬುದ್ಧಿವಂತರ ಜ್ಞಾನವನ್ನು ಮೀರಿಸಿದ ಮುಗ್ಧತೆ ಆತನದು. ಡೆವಿಲ್ಸ್‍ನಲ್ಲಿನ ಕೇಂದ್ರ ವ್ಯಕ್ತಿ ಏಕವಿಷಯ ಭ್ರಮೆಗೊಳಗಾದ ವಿಶಿಷ್ಟಮನಃಸ್ಥಿತಿಯವ್ಯಕ್ತಿ. ಪಾಶ್ಚಾತ್ಯಪ್ರೇಮಿಗಳನ್ನು ವಿರೋಧಿಸಲು ರಚಿತವಾದ ಕೃತಿಯಿದು. ಆದರೆ ಇದರಲ್ಲಿ ಲೇಖಕ ಭವಿಷ್ಯಜ್ಞಾನಿಯಾಗಿ ಸಂಯಮಹೀನರಾದ ಎಲ್ಲ ರಾಜಕಾರಣಿಗಳ ಆಂತರ್ಯದ ರೀತಿಯನ್ನು ನಿರೂಪಿಸಿದ್ದಾನೆ. 1904ರ ಅನಂತರ ಬಂದ ನಾಯಕರು ಇಂಥವರೇ.

	ಇವೆಲ್ಲವನ್ನೂ ಮೀರಿಸಿದ ಕೃತಿ ದಿ ಬ್ರದರ್ಸ್ ಕಾರಾಮಾಜಾಯ್. ಐಹಿಕಭೋಗಮಗ್ನನೂ ಮೂರ್ಖನೂ ಎಲ್ಲವನ್ನೂ ಹಾಸ್ಯಮಾಡುವವನೂ ಆದ ಮುದುಕ ತಂದೆ ಮತ್ತು ಆತನ ಮಕ್ಕಳ ಸುತ್ತ ಹೆಣೆದಿರುವ ಕಥೆಯಿದು. ಇಲ್ಲಿನ ನೀಚ ಮುದುಕ ಮತ್ತು ಆತನ ಮೂವರು ಮಕ್ಕಳಲ್ಲಿ ನರಕದಿಂದ ಸ್ವರ್ಗದವರೆಗಿನ ಸ್ತರಗಳನ್ನೆಲ್ಲ ಲೇಖಕ ನಿರೂಪಿಸಿದ್ದಾನೆಂದು ಹೇಳುವುದುಂಟು. ಸಾಮಾಜಿಕ ಸಮಸ್ಯೆಗಳನ್ನೂ ತಾತ್ತ್ವಿಕ ಮೌಲ್ಯಗಳನ್ನೂ ಪ್ರತ್ಯೇಕಿಸಲು ಒಪ್ಪದ ಲೇಖಕನ ಭಗವನ್ವೇಷಣೆ ಇಲ್ಲಿ ಪ್ರತಿಬಿಂಬಿತವಾಗಿದೆ. ಮಾನವ ತನ್ನ ಅರಿವಿನಿಂದ ನವಚೇತವನ್ನು ಪಡೆಯುವನೆಂಬ ನಂಬಿಕೆ ನಿರೂಪಿತವಾಗಿದೆ. ಲೇಖಕ ಸಾಯುವ ಹೊತ್ತಿಗೆ ಕಾದಂಬರಿಯ ಮೊದಲರ್ಧ ಮಾತ್ರ ಮುಗಿದಿತ್ತು. ಕೃತಿ ಅಪೂರ್ಣವಾದರೂ ಬರೆಹಕ್ಕಿಳಿದಷ್ಟು ಮಾತ್ರ ಬಾಳಿನ ಒಂದು ಹೋಳು ಎನ್ನಬಹುದು. ಏಕಾಂತದಲ್ಲಿ ಗಹನವಾದ ವಿಷಯಗಳನ್ನು ಕುರಿತು ಚಿಂತಿಸಬಯಸುವ ಸನ್ಯಾಸಿ, ತನ್ನ ಬುದ್ಧಿಶಕ್ತಿಗೆ ವ್ಯಾಯಾಮವನ್ನು ನೀಡಬಯಸುವ ವೇದಾಂತಿ, ಸಮಾಧಾನವನ್ನರಸುವ ಅಸುಖಿ, ರೈಲಿನಲ್ಲಿ ಕಾಲವನ್ನು ಕಳೆಯಲು ಬಯಸುವ ಪ್ರಯಾಣಿಕ ಎಲ್ಲರೂ ಪ್ರೀತಿಯಿಂದ ಓದಬಹುದಾದ ಕೃತಿ ಇದು ಎಂದು ಇದನ್ನು ವರ್ಣಿಸಲಾಗಿದೆ.

	ಸಮಕಾಲೀನ ಜೀವನದಲ್ಲಿ ಮತ್ತು ಅಪ್ರಮುಖ ವ್ಯಕ್ತಿಗಳಲ್ಲಿ ಆಸಕ್ತಿ, ಕಷ್ಟಜೀವಿಗಳಲ್ಲಿ ಅನುಕಂಪ-ಇವುಗಳ ನಿರೂಪಣೆಯಲ್ಲಿ ದಸ್ತಯೇಫ್‍ಸ್ಕಿ ವಾಸ್ತವಿಕ ಪಂಥಕ್ಕೆ ಸೇರಿದವನಾದರೂ ವೃತ್ತಾಂತ ಮತ್ತು ಘಟನೆಗಳಿಗೆ ಪ್ರಾಮುಖ್ಯ ನೀಡುವುದರಲ್ಲಿ ಭಿನ್ನನಾಗಿದ್ದಾನೆ. ಈತನ ಕಥೆಗಳಲ್ಲಿ ಕೋಲಾಹಲಕರವಾದ ಘಟನೆಗಳು, ಕುತೂಹಲಕಾರಿಯಾದ ಅಂಶಗಳು, ತಿರುವುಗಳು ಉಂಟು. ಈತ ಜನಸಾಮಾನ್ಯಕ್ಕೆ ಸೇರಿದವ. ಟಾಲ್ಸ್‍ಟಾಯಿಯ ಕೃತಿಗಳ ನಯ, ಲಾಲಿತ್ಯ, ಸಂಯಮ, ಗಾಂಭೀರ್ಯಗಳು ಈತನ ಕೃತಿಗಳಲ್ಲಿಲ್ಲ. ಈತನ ಕಾದಂಬರಿಗಳೆಲ್ಲ ಧ್ಯೇಯನಿಷ್ಠವಾದವು. ಇತರರು ಚಳಿ ಸೆಖೆಗಳನ್ನು ಅನುಭವಿಸುವಂತೆ ಈತ ಭಾವಗಳನ್ನು ಅನುಭಸುತ್ತಿದ್ದನೆಂದು ಹೇಳುವುದುಂಟು. ಟಾಲ್ಸ್‍ಟಾಯಿಯಂತೆ ಈತನೂ ಮಾನಸಿಕ ವಿಶ್ಲೇಷಣೆಯ ಕಾದಂಬರಿಕಾರ. ಈತನ ಸಾಧನ ವಿಶ್ಲೇಷಣೆ. ಟಾಲ್ಸ್‍ಟಾಯಿಯ ಪ್ರಶ್ನೆ ಏಕೆ ಆದರೆ ಈತನ ಪ್ರಶ್ನೆ ಏನು, ಟಾಲ್ಸ್‍ಟಾಯ್ ಶಾಂತಿಯ ಅನ್ವೇಷಣದಲ್ಲಿ ನಿಶ್ಚಲ ನೈತಿಕ ನಿಯಮದತ್ತ ತಿರುಗಿದರೆ ಈತ ಪಾಶ್ಚಾತ್ಯ ರಾಷ್ಟ್ರಗಳ ಇಳಿಮುಖ ವಿಜ್ಞಾನ ಮತ್ತು ತಾಂತ್ರಿಕ ಪ್ರಗತಿಯ ಅನಾಹುತಗಳು, ಯೂರೋಪಿನ ಮಧ್ಯಮವರ್ಗದ ಪ್ರಾಪಂಚಿಕ ಮನೋವೃತ್ತಿ ಪರಿಣಾಮ, ಸಾಂಸ್ಕøತಿಕ ಮೌಲ್ಯಗಳ ಅಗತ್ಯ-ಎಲ್ಲವನ್ನೂ ಗುರುತಿಸಿದ. ಈತನ ಆಸಕ್ತಿ ಪರಮಮೌಲ್ಯಗಳ ಪ್ರಭಾವಕ್ಕೆ ಒಳಗಾದ ಮನಸ್ಸಿನ ಪದರಗಳ ವಿಶ್ಲೇಷಣೆಯಲ್ಲಿ. ಈತನ ಒಳ ಹೋರಾಟ ಆಧ್ಯಾತ್ಮಿಕ ದಿಗ್ಭ್ರಮೆಗೆಯ್ಯುವಂಥದು. ಎಲ್ಲದರ ಆಧಾರವನ್ನೂ ಪ್ರಶ್ನಿಸಿ ಜೀವನದ ಅಸ್ತಿಭಾರವನ್ನು ಅರಸುವ ಪ್ರವೃತ್ತಿ ಈತನದು. ಆದುದರಿಂದ ಈ ಹೋರಾಟದ ವಸ್ತು ಸ್ವರೂಪವನ್ನು ಈತ ತನಗೆ ತಾನೇ ಸ್ಪಷ್ಟಪಡಿಸಿಕೊಳ್ಳಬೇಕಾಯಿತು. ಈ ಸ್ಪಷ್ಟೀಕರಣದ ಪ್ರಯತ್ನ ಈತನ ಕಾದಂಬರಿಗಳಲ್ಲಿ ಮೂಡಿದೆ. ಆದುದರಿಂದಲೇ ಈತನ ಕೃತಿಗಳ ಅಧ್ಯಯನ ಭಾವಶುದ್ಧಿಯ ಅನುಭವವೆನ್ನಿಸುವುದು. ಅಜಾಗೃತ ಮನಸ್ಸಿನ ಮೂಲೆ ಮೂಲೆಗೂ ಬೆಳಕು ಚೆಲ್ಲುವ ಪ್ರಯತ್ನ ಈತನದು. ಈತ ತನ್ನ ಅನ್ವೇಷಣೆಯ ಎಲ್ಲ ಒಗಟುಗಳು, ಜಟಿಲತೆಗಳಿಗೆ ಕೌತುಕಕಾರಿಯಾದ ನಿರೂಪಣೆಯನ್ನು ತನ್ನ ಕಾದಂಬರಿಗಳಲ್ಲಿ ಕೊಟ್ಟಿದ್ದಾನೆ. ಈತನ ಕಥಾನಾಯಕರ ಭಾವನೆಗಳು, ಆಲೋಚನೆಗಳು ಆ ಪತ್ರಗಳು ಅಂತರಪ್ರಜ್ಞೆಯ ಒಡಲಿನಿಂದ ಚಿಮ್ಮುತ್ತವೆ. ಪಾತ್ರಗಳು ಸಂಪೂರ್ಣವಾದ ಸ್ವಾತಂತ್ರ್ಯದಿಂದ ವರ್ತಿಸುತ್ತವೆ. ತಾತ್ತ್ವಿಕ ಮತ್ತು ಕಾಲ್ಪನಿಕ ಎಳೆಗಳನ್ನು ಒಟ್ಟಿಗೆ ಹೆಣೆಯುವುದರಲ್ಲಿ ಲೇಖಕ ಪೂರ್ಣ ಕುಶಲ. ತತ್ತ್ವವನ್ನೇ ಬಾಳಿನ ಮಹಾಶಕ್ತಿಯನ್ನಾಗಿ ನಿರೂಪಿಸುವ ಹೊಸ ಮನೋವಿಶ್ಲೇಷಣಾತ್ಮಕ ಕಾದಂಬರಿಯನ್ನೇ ಈತ ಸೃಷ್ಟಿಸಿದನೆನ್ನಬಹುದು. 

	ಪಾತ್ರಗಳಿಗೆ ಅನುಭವವಾಗುವ ಅನಿರೀಕ್ಷಿತ ಭಾವನಾತ್ಮಕ ಅರಿವುಗಳನ್ನು ಈತನಂತೆ ಬೇರಾರೂ ನಿರೂಪಿಸಲಾರರು. ಈತನ ದುರಂತ ಪಾತ್ರಗಳು ಈತನ ಭಗವದನ್ವೇಷಣೆಯನ್ನು ಪ್ರತಿಬಿಂಬಿಸುತ್ತವೆ. ಒಂದು ಕಡೆ ಆಸ್ತಿಕ ಮನೋವೃತ್ತಿ, ಮತ್ತೊಂದು ಕಡೆ ಎಲ್ಲವನ್ನೂ ಪ್ರಶ್ನಿಸುವ ಅನಿಶ್ಚಯ ವೃತ್ತಿ ಎರಡೂ ಈತನ ಸ್ವಭಾವದಲ್ಲಿ ಬೆರೆತವಾಗಿ ಆಂತರ್ಯದಲ್ಲಿ ಉದ್ಭವಿಸುವ ಘರ್ಷಣೆ ಈತನ ಕಾದಂಬರಿಗಳಲ್ಲಿ ನಿರೂಪಿತವಾಗಿದೆ.

	ಈತನ ಪತ್ರಿಕಾಲೇಖನಗಳಲ್ಲಿ ಪ್ರಾರಂಭದಲ್ಲಿ ಪ್ರಜಾಪ್ರಭುತ್ವ ಪಂಥದ ಪ್ರಭಾವವೂ ಅನಂತರದಲ್ಲಿ ರಾಷ್ಟ್ರೀಯ ಮತ್ತು ಮಂದಗಾಮಿ ಪಂಥದ ಪ್ರಭಾವವೂ ಕಾಣುತ್ತವೆ. ಈತ ನೀಡಿದ ಪುಷ್ಕಿನ್ನನ ಮೇಲಿನ ಭಾಷಣ (1880) ಸ್ಮರಣೀಯವಾದುದು.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ